ಧಾರವಾಡ: ನಗರದ ಮನೆ ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಮನೆಗಳ್ಳರ ಕಾಲಿಗೆ ವಿದ್ಯಾಗಿರಿ ಠಾಣೆಯ ಪೊಲೀಸರು ಗುಂಡೇಟು ಹಾರಿಸಿರುವ ಕ್ರೈಂ ಇನ್ಸಿಡೆಂಟ್ ಇಂದು ಬೆಳಗಿನ ಜಾವ ನಡೆದಿದೆ.
ವಿಜಯ ಅಣ್ಣಿಗೇರಿ ಹಾಗೂ ಮುಜಾಮಿಲ್ ಸೌದಾಗರ್ ಎಂಬ ಕುಖ್ಯಾತ ಆರೋಪಿಗಳು 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಶಾಮಿಲಾಗಿದ್ದು, ಪೋಲೀಸರು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಪಿಎಸ್ಐ ಮಲ್ಲಿಕಾರ್ಜುನ್ ಹೊಸೂರ್ ನೇತೃತ್ವದ ತಂಡ ಅಪಾಯದ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿ, ಆತ್ಮರಕ್ಷಣೆಗೆ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಿದ್ದಾರೆ. ಘಟನೆಯಲ್ಲಿ ಪಿಎಸ್ಐ ಮಲ್ಲಿಕಾರ್ಜುನ್ ಹೊಸೂರ್ ಹಾಗೂ ಪೊಲೀಸ್ ಸಿಬ್ಬಂದಿ ಮೊಹಮ್ಮದ್ ಇಸಾಕ್ ನದಾಫ್ ಅವರು ಕೂಡ ಗಾಯಗೊಂಡಿದ್ದು, ಗುಂಡೇಟು ತಿಂದ ಆರೋಪಿಗಳೊಂದಿಗೆ ಎಲ್ಲರನ್ನೂ ಧಾರವಾಡ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯಿಂದ ಧಾರವಾಡದ ಮನೆ ಕಳ್ಳತನ ಪ್ರಕರಣಗಳಿಗೆ ಬಿಸಿ ಮುಟ್ಟಿಸಿದ್ದು, ಪೋಲೀಸರ ದಿಟ್ಟ ಕಾರ್ಯಚಟುವಟಿಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಸದ್ಯ ವಿದ್ಯಾಗಿರಿ ಠಾಣೆಯ ಪೊಲೀಸರು ಘಟನೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.