ಯಲ್ಲಾಪುರ : ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ರಾಜ್ಯ ಸಾರಿಗೆ ನಿಗಮದ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡ ಘಟನೆ ಇಂದು ಬೆಳಗಿನ ಜಾವ ಹಿಟ್ಟಿನಬೈಲು ಘಾಟ್ನಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಸ್ ಚಾಲಕ ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ಮೃತರನ್ನು ಗುಳೇದಗುದ್ದದ ನಿವಾಸಿ ನೀಲವ್ವ ಯಲ್ದುರಗಪ್ಪ ಹರಡೊಳ್ಳಿ (40), ಬಾಗಲಕೋಟೆ ಜಿಲ್ಲೆಯ ಜಳಿಹಾಳದ ಗಿರಿಜವ್ವ ಅಯ್ಯಪ್ಪ ಬುಡಣ್ಣವರ (30) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.

ಅಮಿನಗಡ, ಬದಾಮಿ ಹಾಗೂ ಹುನಗಂದ ಮೂಲದ ಏಳು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಒಬ್ಬ ಪ್ರಯಾಣಿಕರ ದೂರು ಆಧರಿಸಿ, ಯಲ್ಲಾಪುರ ಪೊಲೀಸರು ಬಸ್ ಹಾಗೂ ಲಾರಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಲಾರಿ ಚಾಲಕ ವಾಹನವನ್ನು ನಿಲ್ಲಿಸಿದರೂ ಪಾರ್ಕಿಂಗ್ ದೀಪಗಳನ್ನು ಆನ್ ಮಾಡಿರಲಿಲ್ಲವೆಂಬುದೂ ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಬಸ್ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಧರ್ಮಸ್ಥಳಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.