ಧಾರವಾಡ: ನಗರದ ಹಿರೇಮಠ ಓಣಿ ಸಾಬ್ಬೇ ಬಿಲ್ಡಿಂಗ್ ಹತ್ತಿರದ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಧಾರವಾಡ ವಿದ್ಯಾಗಿರಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಆಗಸ್ಟ್ 17ರಂದು ಸಂಜೆ ಮನೆಯೊಂದರಲ್ಲಿ ಕಳ್ಳನೊಬ್ಬ ಬಂಗಾರದ ಮಂಗಳಸೂತ್ರವನ್ನು ಕಳವು ಮಾಡಿದ್ದ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ರವೀಶ್ ಸಿ.ಆರ್ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡುವ ಮೂಲಕ ಪ್ರಕರಣವನ್ನ ಬೇಧಿಸಲಾಗಿದೆ.ಇನ್ನು ಈ ಪ್ರಕರಣದ ತನಿಖೆ ಕೈಗೊಂಡು ಕೇವಲ 78 ಗಂಟೆಗಳಲ್ಲೇ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಬಾಬಾಜಾನ ಮೆಹಬೂಬಸಾಬ್ ಸಂಶಿ (27), ಧಾರವಾಡ ಜನ್ನತನಗರ ನಿವಾಸಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಆರೋಪಿಯಿಂದ ಕಳವು ಮಾಡಿದ್ದ ಮಂಗಳಸೂತ್ರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಪ್ರಕರಣ ಬೇಧಿಸಿದ ವಿದ್ಯಾಗಿರಿ ಪೊಲೀಸರ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶ್ಲಾಘಿಸಿ, ವಿಶೇಷ ಬಹುಮಾನ ಘೋಷಿಸಿದ್ದಾರೆ.