ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕನೊಬ್ಬ ಗುತ್ತಿಗೆದಾರರ ಕಿರುಕುಳ ತಾಳಲಾರದೆ ಧಾರವಾಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಧಾರವಾಡದ ವಾರ್ಡ್ ನಂ. 17ರ ಟೋಲ್ ನಾಕಾ ಬಳಿ ಈ ಘಟನೆ ಸಂಭವಿಸಿದ್ದು, ಮಾಳಮಡ್ಡಿಯ ನಿವಾಸಿ ಕೃಷ್ಣ ವಜ್ಜಣ್ಣನವರ (27) ಕೆಲಸಕ್ಕೆ ಬಂದಿದ್ದ ವೇಳೆ ವಿಷ ಸೇವಿಸಿದ್ದಾರೆ.

ಸಹಪೌರಕಾರ್ಮಿಕರು ಕೂಡಲೇ ಕೃಷ್ಣನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಾಹಿತಿಯ ಪ್ರಕಾರ, ಕೃಷ್ಣ ಗುತ್ತಿಗೆ ಪೌರಕಾರ್ಮಿಕನಾಗಿ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಗುತ್ತಿಗೆದಾರ ಕೃಷ್ಣ ಅರವಿಡಿ ಸಂಪೂರ್ಣ ಸಂಬಳ ನೀಡದೆ, ತನ್ನ ಖಾಸಗಿ ಕೆಲಸಗಳಿಗೂ ಬಳಸಿಕೊಳ್ಳುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ನಿಗದಿತ ₹24,000 ಸಂಬಳದ ಬದಲು ಕೇವಲ ₹7,000–₹8,000 ಮಾತ್ರ ನೀಡಲಾಗುತ್ತಿತ್ತೆಂದು ಸಹಪೌರಕಾರ್ಮಿಕರು ಆರೋಪಿಸಿದ್ದಾರೆ.

ಗುತ್ತಿಗೆದಾರನ ನಿರಂತರ ಕಿರುಕುಳವೇ ಕೃಷ್ಣನ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದೆ ಎಂದು ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಕೋಪಗೊಂಡ ಪೌರಕಾರ್ಮಿಕರು ತಕ್ಷಣ ಕೃಷ್ಣಗೆ ಪರಿಹಾರ ನೀಡಬೇಕು, ಗುತ್ತಿಗೆದಾರನ ಟೆಂಡರ್ ರದ್ದುಪಡಿಸಬೇಕು, ಪಾಲಿಕೆಯೇ ನೇರವಾಗಿ ಸಂಬಳ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.