ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೋಲಿಸ ಕಮಿಷನರೇಟ್ ವತಿಯಿಂದ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡು ಜೈಲಿಗೆ ಅಟ್ಟುವ ಕೆಲಸ ಮಾಡಿದ್ದಾರೆ. ಆದರೂ ಕೂಡ ಮೀಟರ್ ಬೆಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಮಾತ್ರ ಬ್ರೇಕ್ ಬೀಳದಿರುವುದು ವಿಪರ್ಯಾಸವೇ ಸರಿ.
ಇಂದು ಕೂಡ ಬಡ್ಡಿ ವಿಚಾರಕ್ಕೆ ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕುರಿತಂತೆ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರದ ಸೆಟಲ್ಮೆಂಟ್ ನಿವಾಸಿ ವಿನಾಯಕ ರೋಣದ್ (27) ಎಂಬಾತನೇ ಹಲ್ಲೆಗೊಳಗಾದ ಯುವಕ. ಐದು ಸಾವಿರ ರೂ. ಹಣಕ್ಕೆ ಬಡ್ಡಿ ಕೊಡದೆ ಇರುವ ಹಿನ್ನಲೆ ಗಣೇಶ ಸಿದ್ದಾಪುರ, ಅಭಿಷೇಕ ರಾಮಗೇರಿ, ಯಲ್ಲಪ್ಪ ರಾಮಗೇರಿ, ವರುಣ ಭಜಂತ್ರಿ, ಮಣಿಕಂಠ ಸಿದ್ದಾಪುರ, ನಾಗರಾಜ್ ಭಜಂತ್ರಿ, ತಿರಕ್ ಭಜಂತ್ರಿಯಿಂದ ಹಲ್ಲೆ ಮಾಡಿರುವುದಾಗಿ ಹಲ್ಲೆಗೆ ಒಳಗಾದ ಯುವಕ ಹಾಗೂ ಆತನ ಸಂಬಂಧಿಕರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಇನ್ನೊಂದು ಕಡೆ ನೋಡುವುದಾದರೆ ವಿವಾಹಿತ ಗೃಹಿಣಿ ವಿಚಾರವಾಗಿ ಹಲ್ಲೆ ನಡೆದಿದೆ ಎಂಬ ಶಂಕೆಯು ಕೂಡ ವ್ಯಕ್ತವಾಗಿದೆ. ಗೃಹಣಿಯೋರ್ವಳಿಗೆ ವಿಡಿಯೋ ಕಾಲ್ ಮಾಡಿದ್ದ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದ್ದು, ಇದೆ ವಿಚಾರವಾಗಿ ಯುವಕನಿಗೆ ಬುದ್ಧಿ ಮಾತು ಹೇಳಲು ವಿನಾಯಕನನ್ನು ಹಿಡಿಯಲು ಹೋದಾಗ ಗೋಡೆ ಹಾರಿ ಬಿದ್ದಿರುವುದಾಗಿ ತಿಳಿದು ಬಂದಿದೆ. ಎರಡೂ ಘಟನೆಗಳನ್ನು ನೋಡುವುದಾದರೆ ಯುವಕ ಯಾವ ಘಟನೆಯಿಂದ ಹಲ್ಲೆಗೊಳಗಾಗಿದ್ದಾನೆಂಬ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಬೆಂಡಿಗೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡಿರುವ ಯುವಕನನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.