ಧಾರವಾಡದಲ್ಲಿ ಹಿರಿಯ ವೈದ್ಯರೋರ್ವರಿಗೆ ಯುವಕನೋರ್ವ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯುವಕನನ್ನು ಬಂಧನ ಮಾಡಿದ್ದಾರೆ.

ಧಾರವಾಡ ಶ್ರೀರಾಮನಗರದಲ್ಲಿ ತಮ್ಮದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ನದಾಫ್ (75) ಇವರಿಗೆ ಆನಂದ ಕೊಪ್ಪದ ಎಂಬ ಯುವಕ ಹಲ್ಲೆ ಮಾಡಿದ್ದನು.
ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡ ವಿದ್ಯಾಗಿರಿ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ಏನಿದು ಘಟನೆ:
ಇಲ್ಲಿನ ಆಸ್ಪತ್ರೆಗೆ ಯುವಕ ತನ್ನ ತಂಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯ ಫೋನ್ ಕರೆ ಸಂಭಾಷಣೆಯಲ್ಲಿ ಅವಾಚ್ಯ ಪದಗಳ ಬಳಕೆ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಅವಾಚ್ಯ ಶಬ್ದಗಳ ಬಳಸಬೇಡಾ ಇಲ್ಲಿಂದ ಹೊರಗೆ ಹೋಗಿ ಮಾತನಾಡಿ ಎಂದು ತಿಳಿ ಹೇಳಿದ್ದಕ್ಕೆ ಕುಪಿತಗೊಂಡ ಯುವಕ ವೈದ್ಯರ ಮೇಲೆ ಏರು ಧ್ವನಿಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಘಟನೆ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆ ಮಾಡಿ ವೈದ್ಯರು ವಿವರಣೆ ನೀಡಿದ್ದಾರೆ. ಬಳಿಕ ಮತ್ತೆ ಯುವಕ ಆಸ್ಪತ್ರೆ ತೆರಳಿ ವೈದ್ಯರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಈತನ ವಿರುದ್ಧ ಪ್ರಕರಣ ಕೂಡಾ ಪೊಲೀಸರು ದಾಖಲಿಸಿಕೊಂಡಿದ್ದರು.

ಇತ್ತಿಚೆಗೆ ವೈದ್ಯರು ತಮ್ಮ ಹಿರಿಯ ನಾಗರಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡುವ ಮೂಲಕ ಹಲ್ಲೆ ಮಾಡಿದ ಆರೋಪಿಯನ್ನು ಬಂಧನ ಮಾಡಬೇಕು ಎಂದು ಮನವಿ ಮಾಡಿದ್ದರು.
ಇದೀಗ ಪೊಲೀಸರ ಕಾರ್ಯಕ್ಕೆ ಹಿರಿಯ ನಾಗರಿಕರ ಸಂಘ ಪ್ರಶಂಸೆ ವ್ಯಕ್ತಪಡಿಸಿದೆ.