ಟ್ರಕ್ ಹಾಗೂ ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಸ್ಥಳದಲ್ಲೇ ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿ ನಡೆದಿದೆ.
ಗೂಳಪ್ಪ ಉಮ್ಮಣ್ಣವರ(40), ಮೃತ ದುರ್ದೈವಿಯಾಗಿದ್ದಾನೆ. ಹುಬ್ಬಳ್ಳಿ ತಾಲೂಕಿನ ರೊಟ್ಟಿಗವಾಡ ಗ್ರಾಮಕ್ಕೆ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರಕ್ಕೆ ತಾಯಿ ಮತ್ತು ಹೆಂಡತಿಯನ್ನ ಕೂರಿಸಿಕೊಂಡು ಹೋಗಿದ್ದ, ವಾಪಸ್ ಊರಿಗೆ ತೆರಳುವಾಗ ಹೈವೇ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏಕಾಏಕಿ ಎದುರು ಬಂದ ಲಾರಿ ಗೂಳಪ್ಪನ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗೂಳಪ್ಪ ಸಾವನ್ನಪ್ಪಿದ್ದಾನೆ. ಇನ್ನು ಪತ್ನಿ ಭೀಮವ್ವ ಹಾಗೂ ತಾಯಿ ಪಾರವ್ವ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಅಪಘಾತದ ನಂತರ ಲಾರಿ ಚಾಲಕನಿಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.