ಕೂಲಿ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ಮರಳುವಾಗ, ವೇಗವಾಗಿ ಚಲಿಸುತ್ತಿದ್ದ ಜೀಪ್ ವಾಹನ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದ ಕ್ರಾಸ್ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಚುಂಚನೂರು ಗ್ರಾಮದ ಕೆಂಚಪ್ಪ ಈರಣ್ಣವರ (50) ಸ್ಥಳದಲ್ಲೇ ಮೃತಪಟ್ಟರೆ, ಬಸಪ್ಪ (16) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಜೀಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ 20 ಜನ ಗಾಯಗೊಂಡಿದ್ದು, 3 ಜನರ ಸ್ಥಿತಿ ಚಿಂತಾಜನಕವಾಗಿದೆ, ಸದ್ಯ ಗಾಯಾಳುಗಳನ್ನು ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ 25 ಜನ ಕೃಷಿ ಕೂಲಿ ಕೆಲಸಕ್ಕೆಂದು ನವಲಗುಂದ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ತೆರಳಿದ್ದರು. ಕೂಲಿ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ಮರಳುವಾಗ, ವೇಗವಾಗಿ ಚಲಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸಾರ್ವಜನಿಕರು ನೇರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.