ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೂಕು ಮತ್ತೆ ಸದ್ದು ಮಾಡಿದೆ. ನಟೋರಿಯಸ್ ದರೋಡೆಕೋರರ ಕಾಲಿಗೆ ಹು-ಧಾ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಹೌದು, ಭರತ್ ಹಾಗೂ ಫಾರೂಕ್ ಎಂಬಾತರ ಕಾಲಿಗೆ ಗುಂಡು ಬಿದಿದ್ದು, ಮೂಲತಃ ಮಂಗಳೂರಿನ ಭರತ್, ಫಾರುಕ್ ಕಾರುಗಳನ್ನು ಟಾರ್ಗೆಟ್ ಮಾಡಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು.

ಅದರಂತೆ ಫಾರೂಕ್ ಹಾಗೂ ಭರತ್ ಗ್ಯಾಂಗ್’ನ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ನವೆಂಬರ್ 8 ರಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿಯಲ್ಲಿ ಕಾರು ಅಡ್ಡಗಟ್ಟಿ ಚಾಲಕನಿಗೆ ಬೆದರಿಸಿ ದರೋಡೆ ಮಾಡಿದ್ದ, ಈ ಬಗ್ಗೆ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಎಮ್.ಎಮ್.ತಹಶಿಲ್ದಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ 15 ಜನರನ್ನು ಬಂಧಿಸಿದ್ದರು.
ಇಂದು ಆರೋಪಿಗಳನ್ನು ಸ್ಥಳ ಮಹಜರು ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು.
ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡೆಟ್ಟು ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ದರೋಡೆಕೋರ ಫಾರೂಕ್ ಮೇಲೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ 17 ಕ್ಕೂ ಹೆಚ್ಚು ಪ್ರಕರಣಗಳಿವೆ. ಭರತ್ ಮೇಲೂ ಸಹ ರಾಜ್ಯದ ವಿವಿಧೆಡೆ ಪ್ರಕರಣಗಳಿವೆ.
ಕಿಮ್ಸ್ ಗೆ ಭೇಟಿ ನೀಡಿದ ಕಮಿಷನರ್:
ಇನ್ನೂ ಹು-ಧಾ ಪೊಲೀಸ್ ಆಯುಕ್ತ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.