ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದೆ ತಡ ಹು-ಧಾದಲ್ಲಿ ಒಂದಿಲ್ಲೊಂದು ಅಭಿಯಾನದ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿದ್ದಾರೆ. ಈ ನಡುವೆ ಪೊಲೀಸ್ ಆಯುಕ್ತರ ಅಭಿಯಾನಿಯೊಬ್ಬರು ಅವರನ್ನು ನೋಡಿದ ಕೂಡಲೇ ಕಣ್ಣೀರು ಹಾಕಿ, ಕಮಿಷನರ್ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರೊಂದಿಗೆ ಸೆಲ್ಪಿ ತೆಗೆದುಕೊಂಡ ಅಪರೂಪದ ಘಟನೆ ಶ್ರೀ ನಗರ ಕ್ರಾಸ್ ಪ್ರೆಸಿಡೆಂಟ್ ಹೋಟೆಲ್ ಬಳಿ ನಡೆದಿದೆ.
ಹೌದು, ಇತ್ತಿಚಿನ ದಿನಗಳಲ್ಲಿ ಸಂಚಾರ ನಿಯಮ ಪಾಲನೆಯಾಗದೇ ಸಾಕಷ್ಟು ಪ್ರಾಣಹಾನಿ ಸಂಭವಿಸಿರುವುದು ಕಂಡುಬಂದಿದೆ. ಈ ದಿಸೆಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.
ಅದರಂತೆ ರವಿವಾರ ರಾತ್ರಿ ನವನಗರದಿಂದ ವಿದ್ಯಾನಗರ ವರೆಗೆ ಸ್ವತಃ ಸ್ಕೂಟಿ ಹತ್ತಿ ಪೆಟ್ರೋಲಿಂಗ್ ಮಾಡಿದರು.
ಸ್ಕೂಟಿವೊಂದರಲ್ಲಿ ಗಂಡ-ಹೆಂಡತಿ ಮತ್ತು ಮಗುವೊಂದು ಒಂದೇ ವಾಹನದಲ್ಲಿ ಚಲಾವಣೆ ಮಾಡುತ್ತಿದ್ದರು. ಆದರೆ ತಲೆಗೆ ಹೆಲ್ಮೆಟ್ ಧರಿಸಿದ್ದಿಲ್ಲ. ಹೀಗಾಗಿ ಕಮಿಷನರ್ ಎನ್.ಶಶಿಕುಮಾರ್ ಅವರನ್ನು ತಡೆದು ಸಂಚಾರಿ ನಿಯಮದ ಪಾಲನೆ ಬಗ್ಗೆ ತಿಳಿ ಹೇಳಿದರು.
ಆ ಸ್ಕೂಟಿಯಲ್ಲಿದ್ದ ಮಹಿಳೆ ಕಮಿಷನರ್ ಎನ್.ಶಶಿಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರನ್ನು ನೋಡಿದ ಕೂಡಲೇ ಆನಂದ ಬಾಷ್ಪ ಸೂರಿಸಿದ್ದಾರೆ. ಆಮೇಲೆ ಕುಟುಂಬ ಸಮೇತವಾಗಿ ಕಮಿಷನರ್ ಜೊತೆಗೆ ಸೆಲ್ಪಿ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.