ಹುಬ್ಬಳ್ಳಿ: ಚಿಂದಿ ಆರಿಸುವ ಮಗನಿಗೆ ಬುದ್ಧಿ ಮಾತು ಹೇಳಿದ್ದಕ್ಕೆ ತಂದೆ ನಾಗಪ್ಪನಿಗೆ ಹಿಗ್ಗಾ ಮುಗ್ಗಾ ಥಳಿಸಿ, ಕೊಲೆ ಮಾಡಿ ಪರಾರಿಯಾಗಿದ್ದ ಪಾಪಿ ಮಗ ಹಾಗೂ ಸೊಸೆಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೌದು… ನವೆಂಬರ್ 19 ರಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೋಷ್ ನಗರದಲ್ಲಿ ತಂದೆ ಮತ್ತು ಮಗನ ನಡುವೆ ದುಡಿಯುವ ವಿಷಯಕ್ಕೇ ಜಗಳ ಶುರುವಾಗಿತ್ತು, ಬುದ್ದಿಹೇಳಿದ ತಂದೆಗೆ ದಿನವಿಡೀ ಕುಡಿದು ಬಂದು ಮಗ ಅಣ್ಣಪ್ಪ ತನ್ನ ಹೆಂಡತಿಯೊಂದಿಗೆ ಸೇರಿ ತಂದೆ ನಾಗರಾಜನನ್ನೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಗ ಹಾಗೂ ಸೊಸೆಯಿಂದ ಮನಸೋಇಚ್ಚೆ ಹಲ್ಲೆಗೊಳಗಾದ ತಂದೆ ನಾಗರಾಜ್ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾರೆ.

ಇನ್ನು ತನ್ನ ಪತಿಯ ಪರಿಸ್ಥಿತಿ ಕಂಡು ತಾಯಿ ರೇಣುಕಾ ತನ್ನ ಮಗ ಹಾಗೂ ಸೊಸೆಯ ಮೇಲೆ ಪ್ರಕರಣ ದಾಖಲಿಸಿ, ಕೊಲೆಗಡುಕ ಮಗ ಹಾಗೂ ಸೊಸೆಯನ್ನ ಬಂಧನ ಮಾಡುವಂತೆ ಆಗ್ರಹಿಸಿದ್ದರು. ತಾಯಿಯ ದೂರಿನ ಮೇರೆಗೆ ಪಾಪಿಮಗ ಹಾಗೂ ಹೆಂಡತಿಯ ಬಂಧನಕ್ಕಾಗಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಐ ನೇತೃತ್ವದ ತಂಡ ಆರೋಪಿಗಳಾದ ಅಣ್ಣಪ್ಪ ಮೈಸೂರು ಮತ್ತು ಲಕ್ಷ್ಮೀ ಮೈಸೂರು ಎಂಬ ಇಬ್ಬರನ್ನು ಪತ್ತೆಹಚ್ಚಿ, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ಮುಪ್ಪಿನ ಕಾಲದಲ್ಲಿ ತನ್ನನ್ನ ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನ ಚೆನ್ನಾಗಿ ಆರೈಕೆ ಮಾಡಬೇಕಿದ್ದ ಮಗನೇ ತಂದೆಯನ್ನ ಈ ರೀತಿ ಅಮಾನವೀಯವಾಗಿ ಥಳಿಸಿ ಕೊಲೆ ಮಾಡಿರೋದು ನಿಜಕ್ಕೂ ಬೇಸರದ ಸಂಗತಿ. ಮಗನ ಭವಿಷ್ಯದ ಬಗ್ಗೆ ಸಾಗರದಷ್ಟು ಕನಸು ಕಂಡಿದ್ದ ತಂದೆಯ ಭವಿಷ್ಯವನ್ನೇ ನುಂಗಿದ ಆ ಪಾಪಿ ಪುತ್ರನನ್ನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.