ಹುಬ್ಬಳ್ಳಿ: ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದ್ದ ಕೊಲೆ ಪ್ರಕರಣವನ್ನು ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ಬೆಂಡಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು, ಮಂಟೂರ ರಸ್ತೆಯ ನಿವಾಸಿ ಸ್ಯಾಮ್ಯುಯೆಲ್ ಮಬ್ಬು (38) ಎಂಬಾತನನ್ನು ನಗರದ ಹೊರವಲಯದ ರಿಂಗ್ ರೋಡ್ ಬಳಿಯಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.ಕೊಲೆ ಮಾಹಿತಿ ಸಿಗುತ್ತಿದ್ದಂತೆಯೇ ಬೆಂಡಿಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಹಿರಿಯ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಶೀಘ್ರ ಕೊಲೆ ಪ್ರಕರಣವನ್ನು ಬೇಧಿಸಲು ಸೂಚನೆ ನೀಡಿದ್ದರು.

ಅದರಂತೆ ಉತ್ತರ ವಿಭಾಗದ ಎಸಿಪಿ ಉಮೇಶ್ ಚಿಕ್ಕಮಠ ಹಾಗೂ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆಲವೇ ಗಂಟೆಯಲ್ಲಿ ಬಂಧಿಸುವುದಷ್ಟೇ ಅಲ್ಲ ಕೊಲೆಗೆ ಕಾರಣ ಏನೆಂಬುದು ತನಿಖೆಯಿಂದ ಹೊರಗೆ ಎಳೆದಿದ್ದಾರೆ.
ಬಂಧಿತರನ್ನು ಟೈಟಸ್ ಬಾಬು ಆಂಥೋನಿ, ಸುಲೇಮಾನ್ ಬಳ್ಳಾರಿ, ಮೌಲಾಸಾಬ್ ರಾಮಜಿಯಾನವರ್ ಹಾಗೂ ಮೊಹಮದ್ ಶಾ ಫಿರೋಜಾಬಾದ್ ಎಂದು ತಿಳಿದುಬಂದಿದೆ.
ಕೊಲೆಗೆ ಕಾರಣ??
ಈ ಹಿಂದೆ ಮೃತ ಸ್ಯಾಮ್ಯುಯೆಲ್’ನ ಅಕ್ಕ ಮತ್ತು ಅವಳ ಗಂಡನ ನಡುವೆ ಜಗಳ ನಡೆದಿತ್ತು. ನಂತರ ಅಕ್ಕ ತನ್ನ ತವರು ಮನೆಗೆ ಸೇರಿದ್ದಳು. ಇದಕ್ಕೆ ಅಳಿಯ ಸ್ಯಾಮ್ಯುಯೆಲ್ ಕಾರಣ ಎಂದು ಮಾವ ಟೈಟನ್ ಬಾಬು ಕೊಪಗೊಂಡಿದ್ದ. ಸುಲೇಮಾನ್, ಮೌಲಾ ಮತ್ತು ಮೊಹಮದ್ ಜೊತೆಗೆ ಹಣಕಾಸಿನ ವ್ಯವಹಾರ ಕೂಡ ಇಟ್ಟುಕೊಂಡಿದ್ದ. ನಿಮಗೆ ಇಂಪೋರ್ಟ್ ಎಕ್ಸಪೋರ್ಟ್ ಬಿಸಿನೆಸ್ ತಿಳಿಸಿಕೊಡುವ ನೆಪ ಹೇಳಿ ಹಣ ಪಡೆದಿದ್ದನಂತೆ. ಇದೇ ಕಾರಣಕ್ಕೆ ಕೊಲೆಗೆ ಎರಡು ಬಾರಿ ಪ್ರಯತ್ನ ಕೂಡ ಮಾಡಿದ್ದರಂತೆ. ಆದರೆ ಸ್ವಲ್ಪದರಲ್ಲಿಯೇ ಸ್ಯಾಮ್ಯುಯೆಲ್ ಪಾರಾಗಿ ಜೀವ ಉಳಿಸಿಕೊಂಡಿದ್ದ, ಆದರೆ ಗುರುವಾರ ರಾತ್ರಿ ಮಾತ್ರ ಟೈಟಾನ್ ತನ್ನ ಸ್ನೇಹಿತರೊಂದಿಗೆ ಪ್ಲಾನ್ ಮಾಡಿ ಸ್ಯಾಮ್ಯುಯೆಲ್’ಗೆ ರಿಂಗ್ ರೋಡ್ ಹತ್ತಿರ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಮನಬಂದಂತೆ ಹೊಡೆದು ಕೊಲೆ ಮಾಡಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ್, ಪಿಎಸ್ಐ ರವಿ ವಡ್ಡರ, ಸಿಬ್ಬಂದಿಗಳಾದ ಹನುಮಂತ ಕರಗಾವಿ, ಅಂಬಿಗೇರ, ನಿಲಗಾರ, ರಾಮು ಹರ್ಕಿ, ರಮೇಶ್ ಹಿತ್ತಲಮನಿ, ಬಸವರಾಜ್ ಗಳಗಿ, ಸೋಮನಾಥ್ ಮೇಟಿ ಅವರು ಯಶಸ್ವಿಯಾಗಿದ್ದು, ಭೀಕರವಾಗಿ ಸಾವನ್ನಪ್ಪಿರುವ ವ್ಯಕ್ತಿಯ ಕುಟುಂಬಸ್ಥರಿಗೆ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಿದ್ದು, ಇವರ ಕಾರ್ಯವೈಖರಿಗೆ ಸಾರ್ವಜನಿಕರು ಹಾಗೂ ಕಮೀಷನರೇಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.