ಹುಬ್ಬಳ್ಳಿ: ರೂಢಿಗತ ಮತ್ತು ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕ ವ್ಯಾಪ್ತಿಯ 45 ಜನರನ್ನು ಬೇರೆಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ, ಕೊಲೆಗೆ ಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು ಗುರುತಿಸಿ 45 ಜನರನ್ನು ಬೀದರ, ಕಲಬುರಗಿ, ಯಾದಗಿರಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ರೂಢಿಗತ ಮತ್ತು ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ಮೇಲೂ ಸೂಕ್ತ ಕ್ರಮಕೈಗೊಳ್ಳಲಾಗುವುದು. ಇನ್ನೂ ಹಲವರನ್ನು ಗಡಿಪಾರು ಮಾಡಲು ಯೋಜಿಸಲಾಗಿದೆ. ಕೆಲವರು ನ್ಯಾಯಾಂಗ ವಶದಲ್ಲಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಪಟ್ಟಿ ಸಿದ್ಧಪಡಿಸಲಾಗುವುದು. ಕೆಲವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಯೋಜಿಸಲಾಗಿದೆ. ಆದಷ್ಟು ಬೇಗ ಅದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.