ಹುಬ್ಬಳ್ಳಿ: ರಾತ್ರೋರಾತ್ರಿ ದೇವಸ್ಥಾನದ ಬೀಗ ಮುರಿದು ಹುಂಡಿ ಕಳ್ಳತನ ಮಾಡಿ ಪರಾರಿಯಾಗಿದ್ದ ನಟೋರಿಯಸ್ ಖದೀಮರನ್ನ ಬಂಧಿಸುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜನೇವರಿ 3 ರಂದು ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬಳಿ ಇರುವ ಜೈನಮಂದಿರದ ಕೀಲಿ ಮುರಿದು ಒಳಹೊಕ್ಕ ಖದೀಮರು ದೇವಸ್ಥಾನದ ತಿಜೋರಿ ಮುರಿದು ಕಾಣಿಕೆಯ ಹುಂಡಿಯಲ್ಲಿ ಸಂಗ್ರಹವಾಗಿದ್ದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ರಾತ್ರೋ ರಾತ್ರಿ ಯಾರೂ ಇಲ್ಲದ್ದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮಂದಿರದ ಒಳಹೊಕ್ಕು ತಿಜೋರಿಯ ಕೀಲಿ ಮುರಿದ್ದಲ್ಲದೇ ದೇವರ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಹಣವನ್ನ ದೋಚಿ ಪರಾರಿಯಾಗಿದ್ದರು.

ಈ ನಟೋರಿಯಸ್ ಕಳ್ಳರ ಕೈಚಳಕದ ಸಂಪೂರ್ಣ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮೆರಾದಲದಲ್ಲಿ ಸೆರೆಯಾಗಿತ್ತು. ಈ ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಕಳೆದ ಒಂದು ತಿಂಗಳಿಂದ ದಕ್ಷಿಣ ವಿಭಾಗದ ಎಸಿಪಿ ಉಮೇಶ್ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆಯ ಖಡಕ್ ಇನ್ಸ್ ಪೆಕ್ಟರ್ ಎಸ್.ಆರ್.ನಾಯಕ ಹಾಗೂ ಸಬ್ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಸೇರಿದಂತೆ ಠಾಣೆಯ ಹಲವು ಸಿಬ್ಬಂಧಿಗಳ ಹಗಲಿರುಳು ಕಾರ್ಯಾಚರಣೆಯಿಂದ ಇದೀಗ ಎರೆಡು ಜನ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖದೀಮರನ್ನು ಬಂಧಿಸಿದ ರೋಚಕ ಸ್ಟೋರಿ ಹೇಳಿದ ಡಿಸಿಪಿ ಮಹಾನಿಂಗ್ ನಂದಗಾವಿ:
ಜೈನಮಂದಿರದ ಕೀಲಿ ಮುರಿದು ಎಸ್ಕೇಪ್ ಆಗಿದ್ದ ಕಳ್ಳರು ಮತ್ತೆ ಗುಜರಾತ್ ನಿಂದ ಬಂದು ಕಳ್ಳತನ ಮಾಡಿ ಮತ್ತೆ ಎಸ್ಕೇಪ್ ಆಗುತ್ತಿದ್ದರು, ಮಧ್ಯಾರಾತ್ರಿ ಬೈಕ್ ಮೇಲೆ ಹೊರಟಿದ್ದ ಕುಂದಗೋಳ ಮೂಲದ ವ್ಯಕ್ತಿಗೆ ನಾಲ್ಕು ಐದು ಜನ ಸೇರಿ ಸುಲಿಗೆಗೆ ಯತ್ನಿಸಿದ್ದರು, ಬೈಕ್ ಸೇರಿ ನಗದು, ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿ ಗ್ಯಾಂಗ್ ಎಸ್ಕೇಪ್ ಆಗಿತ್ತು, ಇದಾದ ಸ್ವಲ್ಪ ಸಮಯದ ನಂತರ ರವಿಚಂದ್ರ ಎಂಬಾತನ ಸುಲಿಗೆ ಮಾಡಿತ್ತು, ತದನಂತರ ಮಂಟೂರು ರಸ್ತೆಯಲ್ಲಿ ಶಾರಿಕ್ ಎಂಬುವರ ಮನೆ ಮೇಲೆ ಕಲ್ಲು ತೂರಾಟ ಮಾಡಿ ದರೋಡೆಗೆ ಯತ್ನಿಸಿದ್ದಾರೆ. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದರು ಇವರ ಮೇಲೆ ಗದಗ, ಬಳ್ಳಾರಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಬೆಂಡಿಗೇರಿ ಠಾಣೆಯ ಪೊಲೀಸರು ನಾಕಾಬಂದಿ ಹಾಕುವ ಮೂಲಕ ಅಲರ್ಟ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಬೈಕ್ ಮೇಲೆ ವೇಗವಾಗಿ ಹೋಗುತ್ತಿದ್ದವರ ತಪಾಸಣೆಗೆ ಮುಂದಾಗಿದ್ದ ವೇಳೆ ಪೊಲೀಸ ಸಿಬ್ಬಂಧಿಗಳಾದ ಶರಣು ಹಾಗೂ ಸೋಮನಾಥ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಖದೀಮರಾದ ಗುಜರಾತ್ ಮೂಲದ ದಿಲೀಪ್ ಹಾಗೂ ನಿಲೇಶ್ ಇಬ್ಬರ ಕಾಲಿಗೆ ಗುಂಡೇಟು ಹೊಡೆಯುವ ಮೂಲಕ ನಟೋರಿಯಸ್ ಖದೀಮರನ್ನ ಸೆರೆಹಿಡಿದಿದ್ದಾರೆ. ಜೊತೆಗಿದ್ದ ಮೂವರು ಖದೀಮರು ಎಸ್ಕೇಪ್ ಆಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಇನ್ನು ಈ ವೇಳೆ ಖದೀಮರು ನಡೆಸಿದ ಹಲ್ಲೆಯಿಂದ ಗಾಯಗೊಂಡ ಪಿಎಸ್ಐ ಅಶೋಕ್, ಸಿಬ್ಬಂಧಿ ಶರಣು, ಸೋಮನಾಥ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂಧಿಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲಿಸಲಾಗಿದೆ.
ಇನ್ನು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರೋ ಪೊಲೀಸ್ ಸಿಬ್ಬಂಧಿಗಳನ್ನ ಹಾಗೂ ಗುಂಡೇಟು ತಿಂದ ಆರೋಪಿಗಳನ್ನ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹಾಗೂ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.