ಹುಬ್ಬಳ್ಳಿ: ಚಿನ್ನಾಭರಣ ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಚಿನ್ನಾಭರಣ ಖರೀದಿ ಹಾಗೂ ಮಾರಾಟದ ವಿಚಾರದಲ್ಲಿ ಅದೆಷ್ಟೋ ಜನ ಕೋಟ್ಯಾಧಿಪತಿಗಳಾಗಿರೋದನ್ನ ನೋಡಿದ್ದೇವೆ, ಅದೇ ರೀತಿ ಅದೇ ಚಿನ್ನಾಭರಣದ ವಿಚಾರದಲ್ಲಿ ಅನೇಕ ಜನ ಮಕ್ಮಲ್ ಟೋಪಿ ಹಾಕಿಕೊಂಡು ಹೋಗಿದ್ದೂ ಉಂಟು. ಈಗ ಇಂತಹದೇ ಒಂದು ಪ್ರಕರಣದಲ್ಲಿ ಚಿನ್ನದಿಂದ ವಿಭಿನ್ನ ರೀತಿಯ ಚಿನ್ನಾಭರಣಗಳನ್ನ ಮಾಡಿಕೊಡೋದಾಗಿ ಜನರನ್ನ ನಂಬಿಸಿ ಕಲರ್ ಕಲರ್ ಕಾಗೆ ಹಾರಿಸಿ ದೂರದ ರಾಜ್ಯಕ್ಕೆ ಪರಾರಿಯಾಗಿದ್ದ ಗೋಲ್ಡ್ ಖದೀಮನನ್ನ ತಮ್ಮ ಪ್ರಾಣ ಲೆಕ್ಕಿಸದೇ ಕರ್ತವ್ಯದ ನಿಷ್ಠೆಯಂತೆಯೇ ಸೆರೆಹಿಡಿಯುವಲ್ಲಿ ಹುಬ್ಬಳ್ಳಿಯ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಳೆಯ ಬಂಗಾರ ಪಡೆದು ಹೊಸ ರೀತಿಯ ಆಭರಣಗಳನ್ನ ತಯಾರು ಮಾಡಿಕೊಡೋದಾಗಿ ನಂಬಿಸಿ ಪಶ್ಚಿಮ ಬಂಗಾಳ ಮೂಲಕ ಜಾಕೀರ ಅಲಿ ಮಲ್ಲಿಕ್ ಎಂಬ ವ್ಯಕ್ತಿಯೊಬ್ಬ ಸಾದಿಕ್ ಅಹ್ಮದ್ ಗಡವಾಲೆ ಎಂಬ ವ್ಯಕ್ತಿಯಿಂದ ಕಳೆದ ವರ್ಷ 140 ಗ್ರಾಂ ಬಂಗಾರ ಹಾಗೂ 2.87.000 ನಗದು ಪಡೆದು ಪರಾಯಾಗಿದ್ದ. ಇತ್ತೀಚೆಗಷ್ಟೇ ಈ ಕುರಿತು ದಾಖಲಾದ ದೂರಿನನ್ವಯ ಈ ಬಂಗಾರ ಖದೀಮನನ್ನ ಪತ್ತೆಹಚ್ಚುವ ನಿಟ್ಟಿನಲ್ಲಿ ಟೌನ್ ಪೊಲೀಸ್ ಠಾಣೆಯ ಪಿಎಸ್ ಐ ವಿನೋದ್ ದೊಡ್ಡಳಿಂಗಪ್ಪನವರ್ ನೇತೃತ್ವದ ತಂಡ ಕಳೆದ 15 ದಿನಗಳಿಂದ ಪಶ್ಚಿಮಬಂಗಾಳಕ್ಕೆ ತೆರಳಿ ಗೋಲ್ಡ್ ಖದೀಮನನ್ನ ಸೆರೆಹಿಡಿದು ಕರೆತಂದಿದ್ದಾರೆ.
*ದಕ್ಷ ಪೊಲೀಸ್ ಅಧಿಕಾರಿಗಳ ಇನ್ವೆಸ್ಟಿಗೇಟ್ ರೋಚಕತೆ*
ಇನ್ನು ಆರೋಪಿ ಜಾಕೀರ್ ಅಲಿ ಕಳೆದ ಹಲವು ತಿಂಗಳುಗಳಿಂದ ಗೋಲ್ಡ್ ಗಳನ್ನೆಲ್ಲ ಎಗರಿಸಿಕೊಂಡು ಪೊಲೀಸರಿಗೇ ಚೆಳ್ಳೆಹಣ್ಣು ತಿನ್ಬಿಸಿ ಪಶ್ಚಿಮಬಂಗಾಳದಲ್ಲಿ ಬೀಡುಬಿಟ್ಟಿದ್ದ. ಹೀಗೆ ಬೀಡುಬಿಟ್ಟಿದ್ದ ಈ ಖದೀಮ ಜಾಕೀರ್ ಅಲಿಯ ಜಾಡು ಹಿಡಿದು ಬರೋಬ್ಬರಿ 12 ದಿನಗಳ ಕಾಲ ಆತನ ತಲಾಶ್ ಗೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಚಾಲೆಂಜಿಂಗ್ ಆಫೀಸರ್ ಎಸಿಪಿ ಉಮೇಶ ಚಿಕ್ಕಮಠ ಹಾಗೂ ದಕ್ಷ ಇನ್ಸ್ ಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಗೋಲ್ಡ್ ಖದೀಮನಿಗೆ ಸಿಂಹಸ್ವಪ್ನರಾಗಿ ತೆರಳಿದ್ದ ಡೈನಾಮಿಕ್ ಪಿಎಸ್ಐ ವಿನೋದ್ ದೊಡ್ಡಲಿಂಗಪ್ಪನವರ್ ಅವರ ನೇತೃತ್ವದಲ್ಲಿ ಕ್ರೈಂ ಸಿಬ್ಬಂಧಿಗಳಾದ ರಾಮರಾವ್ ರಾಥೋಡ್ ಹಾಗೂ ಸುಧಾರಕ ನೇಸೂರ್ ತಂಡ ಕಳೆದ 12 ದಿನಗಳಿಂದ ಪಶ್ಚಿಮ ಬಂಗಾಳದಲ್ಲಿಯೇ ವಾಸ್ತವ್ಯ ಮಾಡಿ ಆತನ ಚಲನವಲನ ಹಾಗೂ ಹೆಜ್ಜೆ ಗುರುತುಗಳನ್ನ ಪತ್ತೆಮಾಡಿ ಕೊನೆಗೂ ಖದೀಮ ಜಾಕೀರ್ ಅಲಿಯನ್ನ ಸೆರೆಹಿಡಿದಿದ್ದಾರೆ.

*ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಖದೀಮನ ಕೈಚಳಕ*
ಬರೋಬ್ಬರಿ 6 ಸಾವಿರ ಕಿ.ಮೀ ದೂರದವರೆಗೂ ತೆರಳಿ ತಲಾಶ್ ನಡೆಸಿ ಆರೋಪಿ ಜಾಕೀರ್ ನನ್ನ ಬಂಧಿಸಿ ಕರೆತಂದಿರೋ ಪೊಲೀಸರಿಗೆ ಆರೋಪಿಯಿಂದ ಮತ್ತಷ್ಟು ಬಲುರೋಚಕ ಸಂಗತಿಗಳನ್ನ ಬಾಯಿ ಬಿಡಿಸಿದ್ದಾರೆ. ಕೇವಲ ಇದೊಂದೇ ಪ್ರಕರಣವಲ್ಲ. ಬದಲಾಗಿ ಈ ಬಂಗಾರ ಕಳ್ಳ ಇದೇ ರೀತಿ ಬರೋಬ್ಬರಿ 29 ಜನರಿಗೆ ಟೋಪಿ ಹಾಕಿ ಸುಮಾರು 370 ಗ್ರಾಂ ಗೂ ಅಧಿಕ ಹಳೆಯ ಬಂಗಾರದ ಆಭರಣಗಳನ್ನ ಹೊಸ ಆಭರಣ ಮಾಡಿಕೊಡೋದಾಗಿ ಪಡೆದು ಒಟ್ಟು 14 ಲಕ್ಷಕ್ಕೂ ಅಧಿಕ ನಗದು ಹಣ ಪಡೆದು ಪರಾರಿಯಾಗಿದ್ದನಂತೆ. ಈ ಎಲ್ಲ ಅಂಶಗಳ ಜಾಡು ಹಿಡಿದು ಇದೀಗ ಪೊಲೀಸರು ಆರೋಪಿ ಜಾಕೀರ್ ನನ್ನು ಬಂಧನ ಮಾಡಿ ನಾಲ್ಕು ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರ ಅಥಿತಿಯಾಗಿರೋ ಜಾಕೀರ್, ಇದೀಗ ಜೈಲಿನಲ್ಲಿ ಮುದ್ದೆಮುರಿಯುತ್ತಿದ್ದಾನೆ.

ಒಟ್ಟಿನಲ್ಲಿ ಹಗಲು ರಾತ್ರಿಯೆನ್ನದೇ ಕಾಯಕವೇ ಕೈಲಾಸ ಎಂಬಂತೆ ಕರ್ತವ್ಯಕ್ಕಾಗಿ ತಮ್ಮ ಅತ್ಯಮೂಲ್ಯ ಸಮಯದ ಜೊತೆಗೆ ಹಗಲು ರಾತ್ರಿ ಊಟ ನಿದ್ದೆ ಬಿಟ್ಟು ಗೋಲ್ಡ್ ಸ್ಮಗ್ಲರ್ ನನ್ನ ಕರೆದಿರೋ ಈ ಪೊಲೀಸ್ ಅಧಿಕಾರಿಗಳ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.
ಸಂತೋಷ್ ಅರಳಿ ಕರ್ನಾಟಕ ಪಬ್ಲಿಕ್ ವಾಯ್ಸ್ ಹುಬ್ಬಳ್ಳಿ.