ವಿಚಾರಣಾಧೀನ ಕೈದಿ ಜೈಲಿನಲ್ಲಿ ನೇಣಿಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಕೆರೆಮತ್ತಿಹಳ್ಳಿ ಬಳಿ ಇರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಕೋಟೆಪ್ಪ ಅಂಬಿಗೇರ್ (42) ನೇಣಿಗೆ ಶರಣಾದ ಖೈದಿ. ಮೃತ ಕೋಟೆಪ್ಪ ಅಂಬಿಗೇರ್ ಸುಮಾರು ಆರುವರೆ ವರ್ಷಗಳ ಹಿಂದೆ ಡಬ್ಬಲ್ ಮರ್ಡರ್ ಮಾಡಿ ಜೈಲು ಪಾಲಾಗಿದ್ದ. ಈತನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತಂತೆ ಹಾಗೂ ನ್ಯಾಯಾಲಯದಿಂದ ಬೆಲ್ ಕೂಡ ಸಿಕ್ಕಿರಲಿಲ್ಲ. ಇದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಆದರೆ ಮೃತನ ಕುಟುಂಬಸ್ಥರು ಜೈಲು ಸೂಪರಿಂಟೆಂಡೆಂಟ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಕೈದಿಗೂ ಜೈಲ್ ಸೂಪರ್ಡೆಂಟ್ ಮಧ್ಯೆ ಕಿರಿಕ್ ನಡೆದಿತ್ತು ಎನ್ನಲಾಗಿದೆ. ಸೂಪರ್ಡೆಂಟ್ ನಾಗರತ್ನ ಮತ್ತು ಕೋಟೆಪ್ಪ ಮಧ್ಯೆ ಅಡುಗೆ ವಿಚಾರವಾಗಿ ಜೈಲಿನ ಅಡುಗೆ ಕೋಣೆಯಲ್ಲೇ ಕಿರಿಕ್ ಆಗಿತ್ತು ಎಂದು ಹೇಳಲಾಗಿದೆ. ಇದೀಗ ಅದೇ ಅಡುಗೆ ಕೋಣೆಯಲ್ಲಿ ಕೋಟೆಪ್ಪ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ತಡವಾಗಿ ಸ್ಥಳಕ್ಕೆ ಬಂದ ಜೈಲ್ ಸೂಪರ್ಡೆಂಟ್ ನಾಗರತ್ನನನ್ನು ಮೃತ ಕೋಟೆಪ್ಪ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇದು ಆತ್ಮಹತ್ಯೆ ಅಲ್ಲಾ ಅಂತಾನೂ ಹೇಳುತ್ತಿದ್ದು, ಸಾವಿನ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು. ಜೈಲಿನಲ್ಲಿ ಸಿಸಿ ಕ್ಯಾಮೆರಾಗಳು ಇರ್ತವೆ, ಅದು ಹೇಗೆ ನೇಣು ಹಾಕಿಕೊಂಡ ಎಂದು ಕುಟುಬಸ್ಥರು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.