ಹುಬ್ಬಳ್ಳಿ: ತೋಟದ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಕೆ ಅಡ್ಡೆ ಮೇಲೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ಮದ್ಯದ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಬಳಿಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಹೊರಠಾಣೆಯ ಕೂಗಳತೆಯ ದೂರದಲ್ಲಿಯೇ ನಕಲಿ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಅಬಕಾರಿ ಎಸ್.ಪಿ ವಿಜಯಕುಮಾರ್ ಹಿರೇಮಠ ನೇತೃತ್ವದಲ್ಲಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಇಂಪೀರಿಯಲ್ ಬ್ಲೂ ಹಾಗೂ ಬ್ಲ್ಯಾಕ್ ಮದ್ಯದ ನಕಲಿ ಬಾಟಲ್ ಹಾಗೂ ಸ್ಟಿಕ್ಕರ್ ದೊರೆತಿವೆ. ಒಟ್ಟು 5 ಲಕ್ಷ ಕಿಮ್ಮತ್ತಿನ ವಸ್ತುಗಳನ್ನು ಅಬಕಾರಿ ಇಲಾಖೆಯವರು ವಶ ಪಡಿಸಿಕೊಂಡು ಎರೆಡು ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹುಬ್ಬಳ್ಳಿ ಅಬಕಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.