ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಾಜಕೀಯ ಹಾಗೂ ಹವಾಲಾ ಜಾಲದ ಮೇಲೆ ಇಡಿ ಅಧಿಕಾರಿಗಳ ವಕ್ರದೆಸೆ ಬಿದ್ದಿದೆ. ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ದಾಳಿ ನಡೆದ ಕೆಲವೇ ಹೊತ್ತಿನಲ್ಲೇ, ಹವಾಲಾ ಕಿಂಗ್ಪಿನ್ ಎಂದು ಕರೆಯಲ್ಪಡುವ ಸಮುಂದರ್ ಸಿಂಗ್ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮತ್ತು ಸಮುಂದರ್ ಸಿಂಗ್ ಇಬ್ಬರಿಗೂ ಹವಾಲಾ ಹಾಗೂ ಕ್ಯಾಸಿನೊ ಲಿಂಕ್ ಇದೆಯೇ ? ಎಂಬ ದಟ್ಟ ಅನುಮಾನಗಳು ಹೆಚ್ಚುತ್ತಿವೆ.

ಹುಬ್ಬಳ್ಳಿಯ ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ನಲ್ಲಿರುವ ಸಮುಂದರ್ ಸಿಂಗ್ ನಿವಾಸದಲ್ಲಿ ಇಡಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ ರಾತ್ರಿ 1.30ರ ಸುಮಾರಿಗೆ ರಾಜಸ್ಥಾನದಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಸಮುಂದರ್ ಸಿಂಗ್ ನ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ, ವೀರೇಂದ್ರ ಪಪ್ಪಿ ಮತ್ತು ಸಮುಂದರ್ ಸಿಂಗ್ ನಡುವಿನ ಚೈನ್ ಲಿಂಕ್ ಕುರಿತಾಗಿ ಇಡಿ ಅಧಿಕಾರಿಗಳು ಸಮಗ್ರ ಮಾಹಿತಿ ಕಲೆಹಾಕುತ್ತಿದ್ದಾರೆ. ಕೋಟ್ಯಾಂತರ ರೂಪಾಯಿಗಳ ಹವಾಲಾ ಹಾಗೂ ಕ್ಯಾಸಿನೊ ವ್ಯವಹಾರ ನಡೆದಿರುವ ಕುರಿತು ಹಾಗೂ ಇಬ್ಬರ ನಡುವಿನ ಸಂಬಂಧಗಳ ಬಗ್ಗೆ ತನಿಖೆ ನಡೆಯುತ್ತಿದೆ. ಬೆಳಗ್ಗೆಯಿಂದ ಸತತ ಆರು ಗಂಟೆಗಳ ಕಾಲ ಸಮುಂದರ್ ಸಿಂಗ್ ವಿಚಾರಣೆ ಮುಂದುವರಿದಿದ್ದು, ಅಧಿಕಾರಿಗಳು ಹೆಚ್ಚಿನ ದಾಖಲೆಗಳ ಸಮೇತ ಸಮುಂದರ್ ಸಿಂಗ್ ನನ್ನೂ ಸಹ ವಿಚಾರಣೆಗೊಳಪಡಿಸಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಸಮುಂದರ್ ಸಿಂಗ್ ರಾಜಸ್ಥಾನದಲ್ಲಿ ತನ್ನ ಮಗನ ಮದುವೆಯನ್ನ ಅದ್ದೂರಿಯಾಗಿ ನಡೆಸಿದ್ದಲ್ಲದೇ, ಮದುವೆಗೆ ಕೋಟ್ಯಾಂತರ ಹಣ ಖರ್ಚು ಮಾಡಿದ್ದಾನೆ. ಅಲ್ದೇ ಹಲವು ಗೇಮಿಂಗ್ ಆ್ಯಪ್ ಗೆ ಕೋಟ್ಯಾಂತರ ರೂಪಾಯಿ ಹವಾಲಾ ಹಣ ವಿನಿಯೋಗಿಸಿದ ಆರೋಪದ ಹಿನ್ನೆಲೆ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದ ಶೋಧಕಾರ್ಯ ನಡೆಸಿದ್ದು, ಶಾಸಕ ಹಾಗೂ ಹವಾಲಾ ಕಿಂಗ್ ಪಿನ್ ನಡುವಿನ ಸೀಕ್ರೇಟ್ ಚೈನ್ ಲಿಂಕ್ ಏನೆಂಬುದು ಸಮಗ್ರ ತನಿಖೆಯ ನಂತರವಷ್ಟೇ ಹೊರಬೀಳಬೇಕಿದೆ.