ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವಿನ ಬಿಆರ್ಟಿಎಸ್ ರಸ್ತೆಯಲ್ಲಿ ಯುವಕರ ಗುಂಪೊಂದು ಕುದುರೆ ಹಾಗೂ ಎತ್ತಿನ ಬಂಡಿ ಮೂಲಕ ರೇಸಿಂಗ್ ಅಭ್ಯಾಸ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಕಳೆದ 8 ರಿಂದ 10 ದಿನಗಳ ಹಿಂದೆ ನಡೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವದು ಗಮನಾರ್ಹ. ವೇಗವಾಗಿ ಸಂಚಾರಿಸುವ ಬಿಆರ್ಟಿಎಸ್ ಬಸ್ಗಳ ಮಧ್ಯೆ ಈ ರೀತಿಯ ಅಪಾಯಕರ ಚಟುವಟಿಕೆ ನಡೆಸಲಾಗಿದೆ. ಕೂದಲೆಳೆ ಅಂತರದಲ್ಲಿ ಅಪಘಾತ ತಪ್ಪಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
https://www.instagram.com/reel/DMVS2x5yUze/?igsh=NWVydGJ3c3ZrZTd6
ಯುವಕರ ಈ ರೀತಿ ಚಟುವಟಿಕೆ ಪ್ರಶ್ನಿಸಿದ ಕೆಲವರು ಹಲ್ಲೆಗೊಳಗಾಗಿರುವುದು, ಹಾಗೆಯೇ ಪ್ರಶ್ನೆ ಕೇಳಿದರೆ ಅವಾಜು ಹಾಕುವಂತಹ ವರ್ತನೆ ತೋರಿರುವುದು ಕೂಡ ಸಾರ್ವಜನಿಕರ ಕಣ್ಗೆ ಬಂದಿದೆ.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧೀನದಲ್ಲಿ ಇರುವ ಬಿಆರ್ಟಿಎಸ್ ರಸ್ತೆಯಲ್ಲಿ ಈ ರೀತಿಯ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದರಿಂದ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಮುಂದೆ ಸಂಭವಿಸಬಹುದಾದ ದುರಂತಗಳಿಗೆ ಯಾರು ಹೊಣೆ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.