ಹುಬ್ಬಳ್ಳಿ: ತನ್ನ ಮೊಬೈಲ್ ಬಳಸದೆ ಬೇರೆ ಬೇರೆಯವರ ಮೊಬೈಲ್ ಬಳಸಿಕೊಂಡು ಕಳೆದ 11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದ ನಿವಾಸಿ ಪ್ರಕಾಶ ಸಾತಪ್ಪ ಹಂಚಿನಮನಿ ಎಂದು ತಿಳಿದುಬಂದಿದೆ, ಈ ಆರೋಪಿಯು ತಮ್ಮ ಅಕ್ಕ ಪಕ್ಕದ ಮನೆಯವರೊಂದಿಗೆ ಹಳೆ ದ್ವೇಷ ಇಟ್ಟುಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮಿಶ್ರಿಕೋಟಿ ಗ್ರಾಮದಲ್ಲಿಯೂ ಕೂಡಾ ಚಾಕು ತೋರಿಸಿ ಮಹಿಳೆಯೋರ್ವಳ ಮಾಂಗಲ್ಯ ಸರವನ್ನು ಮುನೀರ ಎಂಬಾತ ಜೊತೆಗೆ ಸೇರಿ ಸುಲಿಗೆ ಮಾಡಿದ್ದು ಈ ಕುರಿತು ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ತದನಂತರ ಆರೋಪಿತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದನು. ಜಾಮೀನು ಪಡೆದುಕೊಂಡ ನಂತರ ಮುದ್ದತ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 11 ವರ್ಷಗಳಿಂದ ತಲೆ ಮರೆಸಿಕೊಂಡು ಭೂಗತವಾಗಿದ್ದ.

ಈ ಆರೋಪಿಯ ಪತ್ತೆಯಾಗಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣವರ ನೇತೃತ್ವದಲ್ಲಿ, ಕ್ರೈಂ ಸಿಬ್ಬಂದಿಗಳಾದ ಚನ್ನಪ್ಪ, ತಿಪ್ಪಣ್ಣ ಇವರ ತಂಡವು ಆರೋಪಿಯು ಇರುವ ಸುಳಿವನ್ನು ಪತ್ತೆ ಹಚ್ಚಿದೆ.
ತನಿಖೆಯಲ್ಲಿ ಆರೋಪಿಯು ಬಿಚ್ಚಿಟ್ಟ ಸತ್ಯ, ತನ್ನ ಕುಟುಂಬದವರಿಗೂ ಸಹ ಹೇಳದೆ ತನ್ನ ಹೆಸರಿನಲ್ಲಿ ಸಿಮ್ ಪಡೆದುಕೊಳ್ಳದೆ ಬೇರೆಯವರ ಮೊಬೈಲ್ ಬಳಸಿಕೊಳ್ಳುತ್ತಾ ತಲೆಮರಿಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ಮೊಬೈಲ್ ನಂಬರ್ ಪಡೆದುಕೊಂಡು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಯ ಸಹಾಯದಿಂದ ಅತಿ ಚಾಣಾಕ್ಷತನದಿಂದ ಮಾಹಿತಿ ಸಂಗ್ರಹಿಸಿ ಕಳೆದ 11 ವರ್ಷಗಳಿಂದ ರಾಜ್ಯದ ಬೇರೆ ಬೇರೆ ನಗರದಲ್ಲಿ ವಾಸವಾಗಿದ್ದನ್ನು ಖಚಿತಪಡಿಸಿಕೊಂಡು ಹೊಸಪೇಟೆ, ಬೆಂಗಳೂರು ಮದ್ದೂರು ನಗರಗಳಲ್ಲಿ ಇತನ ಸುಳಿವು ಪಡೆದು ನಿನ್ನೆ ಬೆಂಗಳೂರಿನ ಸಾತಗುಡಿ ಎಂಬ ಪ್ರದೇಶದಲ್ಲಿ ಸಿನಿಮಯ ರೀತಿಯಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ಮತ್ತು ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಶ್ಲಾಘಿಸಿ ಬಹುಮಾನ ಗೋಷಿಸಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.