ಹುಬ್ಬಳ್ಳಿ: ಹುಬ್ಬಳ್ಖಿ -ಧಾರವಾಡ ಅವಳಿ ನಗರದಲ್ಲಿ ಬಡ್ಡಿ ಧಂದೆಕೋರರ ಹಾವಳಿ ಮತ್ತೆ ಹೆಚ್ಚಾಗಿದ್ದು, ಬಡ್ಡಿ ದಂಧೆಕೋರನ ಕಾಟಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಸಿದ ಘಟನೆ ಬೆಳಕಿಗೆ ಬಂದಿದೆ.
ಅಮರಗೋಳದ ಆಶ್ರಯ ಕಾಲೋನಿ ನಿವಾಸಿ ಮಂಜುನಾಥ್ ಕುಶಮ್ಮನವರ್, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ, ಅದೇ ಅಮರಗೋಳದ ನಿವಾಸಿ, ಬಡ್ಡಿ ರಾಜಣ್ಣ ಎಂಬುವವನ ಬಳಿ ಕಳೆದ ಹಲವು ತಿಂಗಳುಗಳ ಹಿಂದೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದನಂತೆ, ಆದರೆ ಆ ಮೊತ್ತಕ್ಕೆ ಈಗಾಗಲೇ ನಾಲ್ಕು ಪಟ್ಟು ಬಡ್ಡಿ ಹಣ ಕಟ್ಟಿದರೂ, ಬಡ್ಡಿ ರಾಜಣ್ಣ ನಿರಂತರ ಕಿರುಕುಳ ನೀಡುತ್ತಿದ್ದಾನೆಂದು ಮಂಜುನಾಥ್ ನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದ್ರಿಂದಾಗಿ ಬಡ್ಡಿ ದಂಧೆಕೋರನ ಕಾಟ ತಾಳಲಾರದೇ ಮನನೊಂದು ಮಂಜುನಾಥ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಕುಟುಂಬಸ್ಥರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಂಜುನಾಥನ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ .
ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಒಟ್ಟಿನಲ್ಲಿ ಈ ಘಟನೆಯ ಬೆನ್ನಲ್ಲೇ ಬಡ್ಡಿ ದಂಧೆಕೋರರ ದೌರ್ಜನ್ಯ ಮತ್ತೆ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.