ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ವಿಜಯಪುರ ಜಿಲ್ಲೆಯ ಮನಗೂಳಿ ಕನರಾ ಬ್ಯಾಂಕ್ ದರೋಡೆ ಪ್ರಕರಣವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. IGP ಚೇತನಸಿಂಗ್ ರಾಥೋಡ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತನಿಖೆಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಲಾಗಿದ್ದು, ಈತನಕ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೇ 24ರಂದು ನಡೆದ ದರೋಡೆ ಪ್ರಕರಣದಲ್ಲಿ ದರೋಡೆಕೋರರು ₹53.26 ಕೋಟಿ ಮೌಲ್ಯದ 58.97 ಕೆಜಿ ಚಿನ್ನಾಭರಣ ಮತ್ತು ₹5,20,450 ನಗದು, ಒಟ್ಟು ₹53,31,20,450 ಮೌಲ್ಯದ ವಸ್ತುಗಳನ್ನು ದೋಚಿದ್ದರು. ಅಲ್ಲದೆ, ಆರೋಪಿಗಳು ಬ್ಯಾಂಕ್ನ ಸಿಸಿಟಿವಿ ಕ್ಯಾಮೆರಾ ಹಾಗೂ ಎನ್ವಿಆರ್ ಕೂಡ ಕಳವು ಮಾಡಿದ್ದರು.

ಈ ಹಿಂದೆ ಜೂನ್ 25 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನಿವಾಸಿಗಳಾದ ವಿಜಯಕುಮಾರ ಮಿರಿಯಾಲ್ (41), ಚಂದ್ರಶೇಖರ್ ನರೆಲ್ಲಾ (38) ಹಾಗೂ ಸುನೀಲ್ ಮೋಕಾ (40) ಎಂಬ ಮೂವರನ್ನು ಬಂಧಿಸಿ ಇವರಿಂದ ಸುಮಾರು 10.5 ಕೆಜಿ ಚಿನ್ನಾಭರಣವನ್ನು (ಅಂದಾಜು ₹10.75 ಕೋಟಿ) ವಶಪಡಿಸಿಕೊಳ್ಳಲಾಗಿತ್ತು.

ತನಿಖೆ ಮುಂದುವರಿಸಿದ್ದ ಪೊಲೀಸರು, ಮತ್ತೆ 12 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ₹39.26 ಕೋಟಿ ಮೌಲ್ಯದ 39 ಕೆಜಿ ಚಿನ್ನಾಭರಣ, ₹1.16 ಕೋಟಿ ನಗದು ಹಾಗೂ ಅಪರಾಧದಲ್ಲಿ ಬಳಸಿದ ವಾಹನಗಳು ಸೇರಿದಂತೆ ಹಲವಾರು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು IGP ಚೇತನಸಿಂಗ್ ರಾಥೋಡ್ ಮಾಹಿತಿ ನೀಡಿದ್ದಾರೆ.

ಈ ಸಮಗ್ರ ಕಾರ್ಯಾಚರಣೆಗೆ 8 ಪೊಲೀಸ್ ತಂಡಗಳು ನೇಮಕ ಮಾಡಲಾಗಿತ್ತು, ಈ ದರೋಡೆ ಪ್ರಕರಣವು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ದರೋಡೆಯಾಗಿದೆ. ಪೊಲೀಸರು ತೋರಿಸಿರುವ ಬುದ್ಧಿವಂತಿಕೆಯ ಕಾರ್ಯಾಚರಣೆಯು ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಜನತೆಯಿಂದ ಮೆಚ್ಚುಗೆ ಹಾಗೂ ಶ್ಲಾಘನೀಯಕ್ಕೆ ಪಾತ್ರರಾಗಿದ್ದಾರೆ.