ಹುಬ್ಬಳ್ಳಿ: ನಗರದ ನಂದಗೋಕುಲ ಬಡಾವಣೆಯಲ್ಲಿ ಗೃಹಿಣಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಜಯಶ್ರೀ ಬಡಿಗೇರ್ (31) ಎಂದು ಗುರುತಿಸಲಾಗಿದೆ.

ಮೇ 21ರಂದು ಜಯಶ್ರೀ ಅವರ ವಿವಾಹ ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ್ ಬಡಿಗೇರ್ ಅವರೊಂದಿಗೆ ನಡೆದಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿವಾನಂದ್, ಮದುವೆಗೆ ಮೊದಲು ಮತ್ತೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದನೆಂಬ ಮಾಹಿತಿ ದೊರಕಿದೆ. ಹದಿಮೂರು ವರ್ಷದ ಪ್ರೇಮ ಸಂಬಂಧವನ್ನು ಮುಚ್ಚಿಟ್ಟು, ಜಯಶ್ರೀಯೊಂದಿಗೆ ವಿವಾಹವಾದ ನಂತರ ಈ ವಿಚಾರವನ್ನು ಆ ಯುವತಿ ಸ್ವತಃ ಜಯಶ್ರೀಗೆ ತಿಳಿಸಿದ್ದಾಳೆ ಎಂದು ಮೂಲಗಳು ಹೇಳುತ್ತಿವೆ.

ಈ ಹಿನ್ನೆಲೆಯಲ್ಲಿ ಪತಿ–ಪತ್ನಿಯ ನಡುವೆ ಅನೇಕ ಬಾರಿ ಗಲಾಟೆಗಳು ನಡೆದಿದ್ದು, ಜಯಶ್ರೀ ಪತಿಯೊಂದಿಗೆ ಬದುಕಲು ಮುಂದಾಗಿದ್ದರೂ, ಶಿವಾನಂದ್ ಅವರಿಂದ ಮಾನಸಿಕ ಕಿರುಕುಳ ಎದುರಿಸುತ್ತಿದ್ದಾಳೆ ಎನ್ನಲಾಗಿದೆ. ಕಳೆದ ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಬೆಳಗಿನ ಜಾವ ಜಯಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತೆಯ ಹೆತ್ತವರು, “ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಘಟನೆಯ ಬಗ್ಗೆ ಗೋಕುಲ್ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.