ಹುಬ್ಬಳ್ಳಿ: ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಮತ್ತು ಅವರ ಮನೆಯವರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕಿರುಕುಳಕ್ಕೆ ಬೇಸತ್ತು ನಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯ ಮಂಟೂರ ರಸ್ತೆಯ ಬ್ಯಾಳಿ ಪ್ಲಾಟ್ ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಕೌಸರ್ ಚೌದರಿ(25) ಮೃತ ಮಹಿಳೆ. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಗಂಡನ ಮನೆಯವರು ಮಹಿಳೆಯನ್ನು ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಹಿಳೆ ಮೃತಪಟ್ಟಿದ್ದಾಳೆ.

2018ರಲ್ಲಿ ಬ್ಯಾಳಿ ಪ್ಲಾಟ್ ನ ಸಾದಿಕ್ ಬಟನವಾಲೆ ಜೊತೆಗೆ ಗಣೇಶ್ ಪೇಟ್ ನಿವಾಸಿ ಕೌಸರ ಚೌದರಿ ಅವರ ವಿವಾಹವಾಗಿತ್ತು. ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ನಂತರ ನಮ್ಮ ಮಗಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾರೆ, ನಮ್ಮ ಮಗಳಿಗೆ ಕೆಟ್ಟ ಪದಗಳಿಂದ ನಿಂದಿಸುವುದು, ಹೊಡಿ ಬಡಿ ಮಾಡುವುದು ಹಾಗೂ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ನಮ್ಮ ಮಗಳು ಕುಗ್ಗಿಹೋಗಿದ್ದಳು. ಹಾಗಾಗಿ ನಮ್ಮ ಮಗಳ ಸಾವಿಗೆ ಅಳಿಯ ಮತ್ತು ಅವರ ಮನೆಯವರ ಕಿರುಕುಳವೇ ಕಾರಣ ಎಂದು ಮೃತ ಮಹಿಳೆಯ ಮನೆಯವರು ದೂರಿದ್ದಾರೆ.
ಮೃತ ಮಹಿಳೆಯ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ನನ್ನ ಮಗಳಿಗೆ ಆಕೆಯ ಗಂಡ ಸಾದಿಕ್, ಅತ್ತೆ, ಮಾವ ಹಾಗೂ ನಾದನೀಯರು ಕಿರುಕುಳ ನೀಡುತ್ತಿದ್ದರು, ನನ್ನ ಮಗಳು ಕಿರುಕುಳಕ್ಕೆ ಬೇಸತ್ತು ನಾಲ್ಕು ತಿಂಗಳಿಂದ ನಮ್ಮ ಮನೆಯಲ್ಲೇ ವಾಸವಿದ್ದಳು, ಮೊನ್ನೆಯ ದಿನ ಅಂದರೆ ರವಿವಾರದಂದು ನಮ್ಮ ಮನೆಗೆ ನನ್ನ ಮಗಳ ಗಂಡ ಸಾದಿಕ ಬಂದು ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದರು. ಎಲ್ಲಾ ಸರಿಹೋಗಿದೆ ಅನ್ನೋ ಅಷ್ಟರಲ್ಲಿ ನಿನ್ನೆಯ ದಿನ ಸೋಮವಾರ ಏಕಾಏಕಿ ನನ್ನ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಆಕೆಯು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿದ್ದಾರೆ, ಆದರೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಗಂಡ ಹಾಗೂ ಆತನ್ನ ಮನೆಯವರು ಕೊಲೆ ಮಾಡಿದ್ದಾರೆಂದು ಮೃತ ತಾಯಿಯು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಈ ಕುರಿತು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ್ ನಾಯಕ್, ಮಹಿಳಾ ಠಾಣೆಯ ಪೊಲೀಸರು ಹಾಗೂ ತಹಶೀಲ್ದಾರ್ ಅವರು ಆಸ್ಪತ್ರೆಗೆ ತೆರಳಿ ಶವ ಪರೀಕ್ಷೆಯನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.